ಹೈಮಂತ ಸ್ತೋಮಗಳು  -
	ಹಿಮಾಲಯ ಪ್ರದೇಶದ ಸ್ಪಿಟಿ ಕಣಿವೆ ಮತ್ತು ಅದರ ಆಸುಪಾಸುಗಳಲ್ಲಿ ರೂಪುಗೊಂಡಿರುವ, ಪ್ರಿಕೇಂಬ್ರಿಯನ್ ಕಲ್ಪದಿಂದ  ಕ್ರಿಟೇಷಸ್ ಕಲ್ಪ ಅಂತ್ಯದವರೆಗಿನ ತನಕದ ಭೂಕಾಲವನ್ನು ಪ್ರತಿನಿಧಿಸುವ ಶಿಲಾಸ್ತೋಮಗಳು. ಅಭ್ರಕದ ಪದರುಶಿಲೆಗಳು, ಸ್ಲೇಟುಗಳು ಮತ್ತು ಪಿಲ್ಲೈಟ್‍ಗಳು ಇವೆಲ್ಲ ಇಲ್ಲಿಯ ಅತ್ಯಂತ ಪುರಾತನ ಶಿಲಾವಿಧಗಳು. ಈ ಸ್ತೋಮಗಳಿಗೆ ಗ್ರೈಸ್‍ಬಾಕ್ ಎಂಬ ಭೂವಿಜ್ಞಾನಿ ವೈಕ್ರಿತಸ್ತೋಮಗಳು ಎಂಬ ಹೆಸರನ್ನು ನೀಡಿದ್ದಾನೆ. ಇವು ಕರ್ನಾಟದ ಧಾರವಾಡ ಶಿಲಾಸ್ತೋಮಗಳಿಗೆ ಸರಿದೂಗುತ್ತವೆ.

	ಹೈಮಂತ ಸ್ತೋಮಗಳಲ್ಲಿ ಕ್ವಾರ್ಟ್‍ಜೈಟುಗಳು, ಜೇಡುಶಿಲೆಗಳು ಮತ್ತು ಸ್ಲೇಟುಗಳು ಸೇರಿವೆ. ಸ್ತೋಮಗಳು ಸ್ಪಿಟಿ ಮತ್ತು ಕೂಲೂ ಕಣಿವೆಗಳ ಚಂದ್ರಾನದಿಯಿಂದ ಸಟ್ಲೆಜ್ ನದಿಯವರೆಗೆ, ಬಾಗುಪಟ್ಟಿ ಆಕಾರದಲ್ಲಿ ಹೊರಹೊಮ್ಮಿವೆ. ಇವು ತಲೆಕೆಳಗಾಗಿವೆ. ಗ್ರೈಸ್‍ಬಾಕ್ ಎಂಬ ಭೂವಿಜ್ಞಾನಿ ಇವನ್ನು ಮೂರು ಭಾಗಗಳಾಗಿ ವಿಂಗಡಿಸಿದ. ಹೆಯ್ದನ್ ಎಂಬ ಭೂವಿಜ್ಞಾನಿ ಪರಿಶೋಧಿಸಿ ಕೆಳಭಾಗದ ಶಿಲೆಗಳಲ್ಲಿ ಆರ್ಡೊವೀಸಿಯನ್ ಕಾಲವನ್ನು ಪ್ರತಿನಿಧಿಸುವ ಅವಶೇಷಗಳು ಇರುವುದನ್ನು ವರದಿ ಮಾಡಿದ. ಈ ಸ್ತೋಮವರ್ಗೀಕರಣಕ್ಕೆ ಸೇರಿದ ಕೆಳಭಾಗವನ್ನು ಹೈಮಂತ ಸ್ತೋಮದಿಂದ ಬೇರ್ಪಡಿಸಿದ. ಆ ಮೊದಲು ಗ್ರೈಸ್‍ಬಾಕ್ ಸೂಚಿಸಿದ ಮಧ್ಯ ಮತ್ತು ಮೇಲ್ಭಾಗವನ್ನು ಒಳಗೊಂಡ ಹೈಮಂತ ಸ್ತೋಮವನ್ನು ಹೈಯ್ದನ್ ಮತ್ತೆ ಮೂರು ಭಾಗಗಳಾಗಿ ವಿಂಗಡಿಸಿದ. ಅವುಗಳ ಕೆಳ ಮತ್ತು ಮಧ್ಯಭಾಗಗಳ ಶಿಲೆಗಳು ಜೀವ್ಯವಶೇಷರಹಿತವಾಗಿವೆ. ಮೇಲ್ಭಾಗದ (ಪರಿಹಿಯೋ ಶ್ರೇಣಿ) ಶಿಲೆಗಳಲ್ಲಿ ಕೇಂಬ್ರಿಯನ್ ಕಲ್ಪದ ಮಧ್ಯ ಮತ್ತು ಅಂತ್ಯಕಾಲಗಳನ್ನು ಸೂಚಿಸುವ ಜೀವ್ಯವಶೇಷಗಳಿವೆ. ಈ ಭಾಗಗಳ ಮಧ್ಯೆ ಅನುರೂಪತೆ ಇರುವುದರಿಂದ, ಹೈಮಂತ ಸ್ತೋಮದ ಕೆಳ ಮತ್ತು ಮಧ್ಯಭಾಗಗಳು ಕೇಂಬ್ರಿಯನ್ ಕಲ್ಪದ ಆದಿಕಾಲವನ್ನೂ ಬಹುಶ: ಪ್ರಿಕೇಂಬ್ರಿಯನ್ ಕಲ್ಪವನ್ನೂ ಪ್ರತಿನಿಧಿಸುತ್ತವೆಂದು ಪರಿಗಣಿಸಲಾಗಿದೆ.

	ಪರಿಹಿಯೋ ಶಿಲಾಶ್ರೇಣಿಗಳಲ್ಲಿ ಒರಿಕ್ಟೊಕೆಪಲಸ್, ಟಿಕೋಪೇರಿಯ ರೆಡ್ಲಿಕಿಯ, ಆಗ್ನೊಸ್ಟನ್, ಮೈಕ್ರೊಡಿಸ್ಕಸ್, ಕೊನೊಕೆಪಲೈಟಿಸ್, ಅನಮೊಕಾರೆ ಮತ್ತು ಒಲಿನಸ್ ಜಾತಿಯ ಟ್ರೈಲೊಬೈಟ್‍ಗಳೂ ಮತ್ತು ಬ್ರಾಕಿಯೋಪೋಡಗಳು, ಹಯೊಲಿತಿಸ್ ಎಂಬ ಟಿರೋಪಾಡ್ ಜಾತಿಯ ಪ್ರಾಣಿಗಳ ಅವಶೇಷಗಳೂ ಇವೆ.				
		(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ